Contact Us

Sharada Vidyalaya
S.K.D.B. Campus, Kodialbail,
Mangalore - 575 003. INDIA.
Email: vidyalayasharada@gmail.com

Ph: 0824-2495464 / 2492628 / 2493089.

Charnwood Camp

ಅಂತರಾಷ್ಟ್ರೀಯ ಜಾಂಬೂರಿಯ ಅವಿಸ್ಮರಣೀಯ ಅನುಭವಗಳು

ಜುಲೈ 30ರಿಂದ ಅಗಸ್ಟ್ 8ರ ವರೆಗೆ ಹತ್ತು ದಿನಗಳ ಕಾಲ ಇಂಗ್ಲೆಂಡಿನ ಚರ್ನ್‍ವುಡ್ ಎಂಬಲ್ಲಿ ಸ್ಕೌಟ್ಸ್ ಮತ್ತು ಗೈಡ್ಸ್‍ನ ಅಂತರಾಷ್ಟ್ರೀಯ ಜಾಂಬೂರಿಯು ಅತ್ಯಂತ ವೈಭವಯುತವಾಗಿ ನಡೆಯಿತು. ಭಾರತದಿಂದ 74 ಸ್ಕೌಟ್ಸ್-ಗೈಡ್ಸ್ ವಿದ್ಯಾರ್ಥಿಗಳು ಮತ್ತು 8 ಜನ ಶಿಕ್ಷಕರು ಸೇರಿ ಒಟ್ಟು 82 ಮಂದಿಗೆ ಈ ಪ್ರತಿಷ್ಠಿತ ಜಾಂಬೂರಿಯಲ್ಲಿ ಪಾಲ್ಗೊಳ್ಳುವ ಅಪೂರ್ವ ಅವಕಾಶ ದೊರೆಯಿತು. ಈ ವೈಭವಯುತ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಪಾಲ್ಗೊಂಡ ಅವಿಸ್ಮರಣೀಯ ಅನುಭವಗಳನ್ನು ಗಳಿಸಿ ತಾಯ್ನಾಡಿಗೆ ಹಿಂದಿರುಗಿದ ಮಂಗಳೂರಿನ ಶಾರದಾ ವಿದ್ಯಾಲಯದ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ ಸದಸ್ಯರು ತಮ್ಮ ಅನುಭವಗಳನ್ನು ನಮ್ಮೊಂದಿಗೆ ಇಲ್ಲಿ ಹಂಚಿಕೊಂಡಿದ್ದಾರೆ.

ಅಂದು ಜುಲೈ 26, ಕಾರ್ಗಿಲ್ ವಿಜಯೋತ್ಸವ ದಿನ ಅಂತರಾಷ್ಟ್ರೀಯ ಜಾಂಬೂರಿಯಲ್ಲಿ ಪಾಲ್ಗೊಳ್ಳಲು ಉತ್ಸಾಹದಿಂದ ಹೊರಟು ನಿಂತ ಇವರೆಲ್ಲರನ್ನೂ ಸಭಾಂಗಣದಲ್ಲಿ ಏರ್ಪಡಿಸಲಾದ ಸಂಭ್ರಮಾಚರಣೆಯಲ್ಲಿ ಮುಖ್ಯ ಅತಿಥಿಗಳಾದ ಕ್ಯಾಪ್ಟನ್ ಬಾಲಕೃಷ್ಣರ ಸಮ್ಮುಖದಲ್ಲಿ ವಿದ್ಯಾಲಯದ ಆಡಳಿತಮಂಡಳಿ, ಪ್ರಾಂಶುಪಾಲರು, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೆಲ್ಲ ಸೇರಿ ಶುಭ ಹಾರೈಕೆಗಳೊಂದಿಗೆ ಬಿಳ್ಕೊಂಡರು. ವಿದ್ಯಾಲಯದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ತಂಡದ 9 ಸ್ಕೌಟ್ಸ್ ಮತ್ತು 14 ಗೈಡ್ಸ್‍ಗಳು ಸೇರಿ ಒಟ್ಟು 23 ವಿದ್ಯಾರ್ಥಿಗಳು ಸ್ಕೌಟ್ಸ್ ಮಾಸ್ಟರ್ ಶ್ರೀ ದಿನೇಶ್ ನೇತೃತ್ವದಲ್ಲಿ ಜುಲೈ 28ರ ಬೆಳಿಗ್ಗೆ 7.00 ಗಂಟೆಗೆ ಮಂಗಳೂರು ವಿಮಾನ ನಿಲ್ದಾನದಿಂದ ಪ್ರಯಾಣ ಹೊರಟರು.ಇಲ್ಲಿಂದ ಜೆಟ್ ಏರ್‍ವೇಸ್‍ನಲ್ಲಿ ಕುಳಿತು ಬೆಂಗಳೂರಿಗೆ ತೆರಳಿಅದೇ ದಿನ ರಾತ್ರಿ 9.15 ಗಂಟೆಗೆ ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣ ಹೊರಟು ರಾತ್ರಿ 12.30ರ ಸುಮಾರಿಗೆ ದುಬೈ ಇಂಟರ್‍ನ್ಯಾಶನಲ್ ಏರ್‍ಪೆÇೀರ್ಟಿಗೆ ತಲುಪಿದರು. ಬಳಿಕ ಅಲ್ಲಿನ ಕಾಲಮಾನ ಪ್ರಕಾರ ಬೆಳಿಗ್ಗೆ 3.30 ಗಂಟೆಗೆ ಮತ್ತೆ ಎಮಿರೇಟ್ಸ್ ವಿಮಾನದಲ್ಲಿ ಪ್ರಯಾಣ ಹೊರಟು ಇಂಗ್ಲೆಂಡಿನ ಬರ್ಮಿಂಗ್‍ಹ್ಯಾಂ ವಿಮಾನ ನಿಲ್ದಾನಕ್ಕೆ ತಲುಪಿದರು. ಇಲ್ಲಿ ಅವರಿಗಾಗಿ ವ್ಯವಸ್ಥೆಗೊಳಿಸಲಾಗಿದ್ದ ಗೆಸ್ಟ್ ಹೌಸಿನಲ್ಲಿ ಆ ದಿನ ವಿಶಾಂತಿ ಪಡೆದರು. ಇಲ್ಲಿ ಅವರಿಗೆ ಭಾರತೀಯ ಶೈಲಿಯ ಊಟೋಪಚಾರದ ವ್ಯವಸ್ಥೆ ಮಾಡಲಾಗಿತ್ತು. ಮರುದಿನ ಇಂಗ್ಲೆಂಡಿನ ಕಾಲಮಾನ ಪ್ರಕಾರ ಬೆಳಿಗ್ಗೆ 9.30 ಗಂಟೆಗೆ ಇವರು ಶಿಬಿರ ಸ್ಥಳವಾದ ಚರ್ನ್‍ವುಡ್ ಎಂಬಲ್ಲಿಗೆ ತಲುಪಿದರು.

ಇಪ್ಪತ್ತೇಳು ದೇಶಗಳಿಂದ ಪಾಲ್ಗೊಳ್ಳಲಿದ್ದ ಹೆಚ್ಚು ಕಮ್ಮಿ ಹತ್ತು ಸಾವಿರದಷ್ಟು ಸ್ಕೌಟ್ಸ್-ಗೈಡ್ಸ್ ಹಾಗೂ ಶಿಕ್ಷಕರಿಗೆ ಉಳಿದುಕೊಳ್ಳಲು ಸುಮಾರು ಮುನ್ನೂರು ಎಕರೆ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ಟೆಂಟಿನ ಮನೆಗಳ ದೃಶ್ಯವನ್ನು ನೋಡಿ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಮೂಕ ವಿಸ್ಮಿತರಾದರು. ಪಕ್ಕಾ ಕಾಂಕ್ರೀಟ್ ಕಟ್ಟಡದೊಳಗೆ ಇದ್ದೇವೆಯೋ ಎನ್ನುವ ರೀತಿಯಲ್ಲಿ ಭಾಸವಾಗುವಂತೆ ನಿರ್ಮಿಸಲಾಗಿದ್ದ ಅಲ್ಲಿನ ಟೆಂಟಿನೊಳಗೆ ನಮ್ಮ ಮನೆಯಲ್ಲಿರುವಂತೆಯೇ ಪ್ರತ್ಯೇಕ ಅಡುಗೆ ಕೋಣೆ, ಡೈನಿಂಗ್ ಹಾಲ್, ಬೆಡ್ ರೂಂ, ಟಾಯ್ಲೇಟ್, ಬಾತ್‍ರೂಂ ಇತ್ಯಾದಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು ಎಲ್ಲೆಡೆ ಸ್ವಚ್ಚತೆ ತುಂಬಿತ್ತು. ಶುಚಿತ್ವಕ್ಕೆ ಇಂಗ್ಲೆಂಡಿನಲ್ಲಿ ಯಾವ ರೀತಿ ಮಹತ್ವವನ್ನು ಕೊಡುತ್ತಾರೆ ಎಂಬುದಕ್ಕೆ ಈ ಟೆಂಟಿನೊಳಗಿನ ವ್ಯವಸ್ಥೆಗಳು ಸಾಕ್ಷಿಯಾಗಿದ್ದವು. ದಿನಾಂಅಕ 28ರ ರಾತ್ರಿ ಶಿಬಿರ ಉದ್ಘಾಟನೆಗೊಂಡಿತು. ಹೈಕಿಂಗ್, ರೋಪ್ ವೇ, ನೆಟ್ ಪ್ಲೇಯಿಂಗ್, ಕಯಾಕೆಂಗ್, ಸೈಲಿಂಗ್, ಬಾಕ್ಸಿಂಗ್, ಪ್ಲೈ-ಫಿಶಿಂಗ್, ಕಾರ್ ರೇಸಿಂಗ್, ಶೂಟಿಂಗ್, ಸ್ವ-ಅಡುಗೆ ತಯಾರಿ, ವಿವಿಧ ಬಗೆಯ ಮುಖ ವರ್ಣಿಕೆ ತಯಾರಿ, ಡ್ರಾಯಿಂಗ್, ಪೈಂಟ್‍ಂಗ್, ಬೋಟಿಂಗ್, ಫಿಶಿಂಗ್, ಮರಗಾಲು ನಡಿಗೆ ಇತ್ಯಾದಿ ಒಂದರಿಂದ ಇನ್ನೊಂದು ರೋಮಾಂಚಕಾರಿ ಕ್ರೀಡೆಗಳು. ಒಂದು ದಿನ ಹೆಬ್ಬವಿನ ಜತೆ ಸರಸವಂತೂ ಮೈ-ಝುಮ್ಮೆನಿಸುವಂತಿತ್ತು. ಅದರಲ್ಲೂ 4ಡಿ ಪ್ರದರ್ಶನ ಮೈ-ನವಿಇರೇಳಿಸುವ ಅನುಭವಗಳನ್ನು ನೀಡಿತು. ಪ್ರತಿಯೊಂದು ಆಟಗಳಲ್ಲೂ ಧೈರ್ಯದಿಂದ ಭಾಗವಹಿಸಿ ಉತ್ತಮ ನಿರ್ವಹಣೆ ತೋರಿದ ವಿಜೇತರಿಗೆ ಸ್ಥಳದಲ್ಲೇಬಹುಮಾನದ ರೂಪದಲ್ಲಿ ಏನಾದರೂ ಬಹುಮಾನಗಳನ್ನು ನೀಡಲಾಗುತ್ತಿತ್ತು. ಅದಕ್ಕಿಂತ ವಿಶೇಷವಾಗಿ ಶಿಬಿರದಲ್ಲಿ ನೀರಿನ ಮಿತ ಬಳಕೆಗೆ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿತ್ತು. 80 ಜನ ವಿದ್ಯಾರ್ಥಿಗಳಿಗೆ ತಾವು ಊಟ ಮಾಡಿದ ತಟ್ಟೆ, ಲೋಟಗಳನ್ನು ತೊಳೆಯಲು ಕೇವಲ ಒಂದೇ ಲೀಟರ್ ನೀರನ್ನು ನೀಡಲಾಗಿತ್ತು. ಆರಂಭದಲ್ಲಿ ಮನಸ್ಸಿಗೆ ಕಿರಿ ಕಿರಿ ಎನಿಸಿದರೂ ಬಳಿಕ ಎಲ್ಲರೂ ಈ ವ್ಯವಸ್ಥೆ ಒಗ್ಗಿಕೊಂಡರು. ಕಡಿಮೆನೀರಿನಲ್ಲಿ ತಟ್ಟೆ-ಲೋಟೆಗಳನ್ನು ಶುಚಿಯಾಗಿ ತೊಳೆದಿಟ್ಟರು.

ಅದೇ ರೀತಿ ಒಂದು ದಿನ ಶಿಬಿರದಲ್ಲಿ ‘ಇಂಡಿಯನ್ ಡೇ’ ಆಚರಣೆಗೆ ಅವಕಾಶ ಲಭಿಸಿತ್ತು. ಆ ದಿನ ಭಾರತೀಯ ಉಡುಗೆ-ತೊಡುಗೆಗಳಾದ ಸೀರೆ, ಕುಪ್ಪಸ, ಲಂಗ-ದಾವಣಿಯಲ್ಲಿ ಗೈಡ್ ವಿದ್ಯಾರ್ಥಿನಿಯರು ಎಲ್ಲರ ಗಮನ ಸೆಳೆದರೆ ಪಂಚೆ, ಶಾಲು, ಜುಬ್ಬದಲ್ಲಿ ನಮ್ಮ ಸ್ಕೌಟ್ಸ್ ವಿದ್ಯಾರ್ಥಿಗಳು ಮಿಂಚಿದರು. ಅದೇ ದಿನ ರಾತ್ರಿ ನಡೆದ ಭಾರತೀಯ ಕಲಾ ಸಾಂಸ್ಕೃತಿಕ ಪ್ರದರ್ಶನದಲ್ಲಿ ಶಾರದಾ ವಿದ್ಯಾಲಯದ ಗೈಡ್ ವಿದ್ಯಾರ್ಥಿನಿಯರು ಪ್ರದರ್ಶಿಸಿದ ಶಿವ ತಾಂಡವ ನೃತ್ಯ ಎಲ್ಲರ ಮನಸೂರೆಗೊಂಡ ಅದ್ಬುತ ಪ್ರದರ್ಶನವಾಗಿ ಶ್ಲಾಘನೆಗಳ ಸುರಿಮಳೆಗೆ ಪಾತ್ರರಾದರು. ಇದೇ ಸಂದರ್ಭದಲ್ಲಿ ಭಾರತೀಯ ಅಡುಗೆ, ಊಟ-ತಿಂಡಿಗಳ ಪ್ರದರ್ಶನವನ್ನೂ ಏರ್ಪಡಿಸಲಾಗಿತ್ತು. ನಮ್ಮ ವಿದ್ಯಾರ್ಥಿಗಳು ವಿದೇಶಿಗರಿಗೆ ಕರಾವಳಿ ಶೈಲಿಯಲ್ಲಿ ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಪಲ್ಯದ ಜತೆ ಅನ್ನ-ಸಾಂಬಾರು ತಯಾರಿಸಿ ಬಡಿಸಿದರು. ನಮ್ಮಲ್ಲಿನ ಖಾರದ ಉಪ್ಪಿನ ಕಾಯಿವಿದೇಶಿಯರ ಕಣ್ಣು ಮೂಗುಗಳಿಂದ ನೀರಿಳಿಸಿತು. ಆದರೂ ಸಾವರಿಸಿಕೊಂಡು ತಿಂದು ಖುಷಿಪಟ್ಟರು. ಒಂದು ದಿನ ಕೋಳಿ ಸಾರಿನ ಊಟದ ರುಚಿಯನ್ನು ಅವರಿಗೆ ತೋರಿಸಲಾಯಿತು. ಅದೇ ರೀತಿ ವಿದೇಶಿಯರ ಉಡುಗೆ-ತೊಡುಗೆ, ಅಡುಗೆಗಳ ಪರಿಚಯವು ನಮ್ಮವರಿಗಾಯಿತು. ವಿಶೇೀಷವಾಗಿ ಇಂಗ್ಲೆಂಡಿನ ಜನರ ಶಿಸ್ತು, ಅಚ್ಚುಕಟ್ಟುತನ, ಶುಚಿತ್ವದೆಡೆ ಗಮನ, ಸ್ನೇಹಪೂರ್ಣ ಹಾಗೂ ಸಹಕಾರಿ ಮನೋಭಾವ ನಮ್ಮ ವಿದ್ಯಾರ್ಥಿಗಳನ್ನು ಪ್ರಭಾವಿತಗೊಳಿಸಿದವು. ದೇಶ-ವಿದೇಶಗಳ ಸಂಸ್ಕೃತಿ-ಸಭ್ಯತೆಗಳ, ಆಚಾರ-ವಿಚಾರಗಳ ವಿನಿಮಯಕ್ಕೆ, ಪರಸ್ಪರರನ್ನು ಅರ್ಥೈಸುವಿಕೆಗೆ ಅವಕಾಶವನ್ನು ಒದಗಿಸಿದ ಈ ಪ್ರತಿಷ್ಠಿತ ಜಾಂಬೂರಿಯಲ್ಲಿ ಪಾಲ್ಗೊಳ್ಳುವುದು ಒಂದು ಅಪರೂಪದ ಪುಣ್ಯವಕಾಶ. ಈ ಶಿಬಿರದ ಅನುಭವಗಳೆಲ್ಲ ಮತ್ತೆ ಮತ್ತೆ ಸ್ಮರಿಸಿಕೊಳ್ಳುವಂತಹ ಅವಿಸ್ಮರಣೀಯ ಅನುಭವಗಳಾಗಿ ಈ ವಿದ್ಯಾರ್ಥಿಗಳಲ್ಲಿ ಧನ್ಯತಾಭಾವವನ್ನು ಉಂಟು ಮಾಡಿದುರಲ್ಲಿ ಆಶ್ಚರ್ಯವಿಲ್ಲ. ಶಿಬಿರ ಸಮಾಪ್ತಿಯ ಬಳಿಕ ಒಂದು ದಿನ ಲಂಡನ್ ನಗರ ವೀಕ್ಷಣೆಗೆ ಅವಕಾಶ ಲಭಿಸಿತ್ತು. ಈ ಸಂದರ್ಭದಲ್ಲಿ ತಾವು ಪೂರ್ವ ಪ್ರಾಥಮಿಕ (ಎಲ್.ಕೆ.ಜಿ.-ಯು.ಕೆ.ಜಿ) ತರಗತಿಗಳಲ್ಲಿ ಕಲಿತು ಅದ್ಯಾಪಿಕೆಯರ ಮುಂದೆ ಪ್ರೀತಿಯ ಹೆತ್ತವರು-ಬಂಧುಗಳ ಮುಂದೆ ಹೇಳಿ ಚಪ್ಪಾಳೆ ಗಿಟ್ಟಿಸಿದ ನರ್ಸರಿ ರೈಮ್ಸ್ ‘ಲಂಡನ್ ಬ್ರಿಡ್ಜ್ ಈಸ್ ಫಾಲಿಂಗ್’ನ ಲಂಡನ್ ಬ್ರಿಡ್ಜ್‍ನ ಪ್ರತ್ಯಕ್ಶ ದರ್ಶನವಾದಾಗ ವಿದ್ಯಾರ್ಥಿಗಳ ಬಾಯಿಂದ ಮಾತೇ ಹೊರಡದೆ ಬಾಯಗಲಿಸಿ, ಕಣ್ಣರಳಿಸಿ, ಮೈಮರೆತು ನಿಂತುಬಿಟ್ಟರು. ಇದಾದ ಬಳಿಕ ಲಂಡನ್ ಪಾರ್ಲಿಮೆಂಟ್ ಸೈಟ್, ಬೃಹತ್ತಾದ ಲಂಡನ್ ಐ, ಹೈಡ್ ಪಾರ್ಕ್, ನೆಲ್ಸನ್ ಸ್ಕ್ವೇರ್ ಮುಂತಾದ ನಗರದ ಪ್ರಸಿದ್ಧ ಪ್ರವಾಸಿಧಾಮಗಳನ್ನು ಬೆರಗುಗಣ್ಣುಗಳಿಂದ ನೋಡುತ್ತಾ ಮತ್ತೆ ಇನ್ನೊಮ್ಮೆ ಈ ಜಗತ್ ಪ್ರಸಿದ್ಧ ತಾಣಗಳ ದರ್ಶನ ಭಾಗ್ಯ ತಮಗೆ ಯಾವಾಗ ಲಭಿಸುವುದು ಎಂಬ ಭಾವನೆಯೊಂದಿಗೆ ಎಲ್ಲವನ್ನು ಕಣ್ತುಂಬ ನೋಡುತ್ತಾ ಆನಂದದ ಅಲೆಗಳಲ್ಲಿ ತೇಲಾಡುತ್ತಾ ಭಾರವಾದ ಹೆಜ್ಜೆಗಳನ್ನಿಡುತ್ತಾ ಅವಿಸ್ಮರಣೀಯ ಅನುಭವದೊಂದಿಗೆ ಮತ್ತೆ ಎಮಿರೇಟ್ಸ್ ವಿಮಾನವೇರಿ ತಾಯ್ನಾಡಿಗೆ ಹಿಂದಿರುಗಿದರು. ತಮ್ಮ ಈ ಅನುಭವಗಳನ್ನು ಹೆತ್ತವರು, ಸಂಬಂಧಿಗಳು, ಗೆಳೆಯರು ಹಾಗೂ ನಮ್ಮಲ್ಲರೊಂದಿಗೆ ಹಂಚಿಕೊಂಡರು. ಅವರೆಲ್ಲರ ಕಣ್ಣುಗಳಲ್ಲಿ ಅದ್ಬುತವನ್ನು ಕಂಡ ಸಾರ್ಥಕತೆಯ ಭಾವ ಪ್ರತಿಫಲಿಸುತ್ತಿತ್ತು.